ಟ್ಯಾಂಕ್ ಕದನ

ಟ್ಯಾಂಕುಗಳ ನೆರವಿನಿಂದ ನಡೆಸಲು. ಯುದ್ಧ 1917ರ ಕ್ಯಾಂಬ್ರೇ ಕದನದಲ್ಲಿ ಟ್ಯಾಂಕನ್ನು ನೆಲ ಕಾದಾಟದಲ್ಲಿ ಇದೊಂದು ನಿರ್ಣಾಯಕ ಹಾಗೂ ಉಪಯುಕ್ತ ಸಾಧನವೆನ್ನುವುದು ದೃಢಪಟ್ಟಿತು. ಆದರೂ ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳ ನಡುವಿನ ಅವಧಿಯಲ್ಲಿ (1918-1939) ಟ್ಯಾಂಕನ್ನು ಯುದ್ಧದ ಪ್ರಧಾನ ಆಕ್ರಮಣಶೀಲ ಆಯುಧವಾಗಿ ಬಳೆಸುವವು ಕಡೆ ಬ್ರಿಟನ್ ಮುಂತಾದ ಮಿತ್ರರಾಷ್ಟ್ರಗಳು ಸಾಕಷ್ಟು ಲಕ್ಷ್ಯ ಹರಿಸಲಿಲ್ಲ. ಹೆಚ್ಚಿಂದರೆ ಕಾಲ್ದಳದ ಹೋರಾಟದ ವೇಳೆ ಅದರ ಒಂದು ಸಹಾಯಕ ಆಯುಧ ಎಂಬುದಾಗಿ ಮಾತ್ರ ಟ್ಯಾಂಕನ್ನು ಪರಿಗಣಿಸಲಾಗಿತ್ತು. ಒಂದನೆಯ ಮಹಾಯುದ್ಧದ ವೇಳೆ ಟ್ಯಾಂಕನ್ನು ಪ್ರವರ್ತಿಸಿದ ಸ್ವತಃ ಬ್ರಿಟಿಷರೇ ಮುಂದಕ್ಕೆ ಲಿಡ್ಡಲ್ ಹಾರ್ಟ್, ಫುಲ್ಲರ್ ಮತ್ತು ಮಾರ್ಟಿಲ್ ಅವರಂಥ ಸೈನ್ಯಶಾಸ್ತ್ರಜ್ಞರ ಸಲಹೆಗಳನ್ನು ಕೂಡ ಲೆಕ್ಕಿಸದೆ ಟ್ಯಾಂಕ್ ಕದನದ ವಿಚಾರದಲ್ಲಿ ಉದಾಸೀನ ಭಾವವನ್ನು ತಳೆದರು. ಡ ಗಾಲ್ ಎಂಬ ಫ್ರಾನ್ಸಿನ ನಾಯಕ ಟ್ಯಾಂಕಿಗೆ ಆಕ್ರಮಣಶೀಲ ಆಯುಧವಾಗಿ ಅಪಾರ ಭವಿಷ್ಯ ಉಂಟು ಎನ್ನುವುದನ್ನು ಅರಿತು ಅದರ ಉತ್ಪಾದನೆಯನ್ನು ಏರಿಸಬೇಕು ಎಂಬುದಾಗಿ ಸರ್ಕಾರಕ್ಕೆ ಮಂದಟ್ಟು ಮಾಡಲು ಪ್ರಯತ್ನಿಸಿ ವಿಫಲನಾದ. ಆದರೆ ಜರ್ಮನಿಯಲ್ಲಿ ಪರಿಸ್ಥಿತಿ ಬೇರೆಯೇ ಆಗಿತ್ತು. ಆ ಮೊದಲು ಟ್ಯಾಂಕ್ ಹೊಡೆತದ ಮೊದಲ ಬಲಿಗಳಾಗಿದ್ದ ಜರ್ಮನರು ತಮ್ಮ ಎಂದಿನ ಪರಿಷ್ಕಾರತೆಯಿಂದ ಟ್ಯಾಂಕಿನ ಹಾಗೂ ಟ್ಯಾಂಕ್ ಕದನದ ಸಮಸ್ತ ಮುಖಗಳನ್ನೂ ಗಂಭೀರವಾಗಿ ಅಧ್ಯಯಿಸಿ ಭವಿಷ್ಯದ ಯಾವುದೇ ಯುದ್ಧದಲ್ಲಿ ಟ್ಯಾಂಕುಗಳು ದಂಡು ದಂಡುಗಳೇ ಹಿಂಡುಹಿಂಡಾಗಿ ಮುಂಚೂಣಿಯಲ್ಲಿ ಇರತಕ್ಕದ್ದು ಎಂದು ತೀರ್ಮಾನಿಸದರು. ಗುಡೇರಿಯನ್ ಎಂಬಾತ ಜರ್ಮನಿಯ ಪಾನ್‍ಝರ್ ಸೈನ್ಯಗಳ ಪ್ರಧಾನ ಶಿಲ್ಪಿ. ಈತನ ನೇತೃತ್ವದಲ್ಲಿ 1938ರ ವೇಳೆಗೆ ಜರ್ಮನ್ ಸೈನ್ಯ ಪ್ರಪಂಚದ ಅತ್ಯಂತ ಅಭೇದ್ಯ ಟ್ಯಾಂಕ್ ದಳಗಳ ಪೈಕಿ ಒಂದನ್ನು ಪಡೆದಿತ್ತು. ಸ್ಪೇನಿನಲ್ಲಿ ನಡೆದ ಆಂತರಿಕ ಯುದ್ಧದಲ್ಲಿ (ಸಿವಿಲ್ ವಾರ್) ಜರ್ಮನರ ಟ್ಯಾಂಕುಗಳನ್ನೂ ಟ್ಯಾಂಕ್ ಕದನದ ತಂತ್ರಗಳನ್ನೂ ಒರೆಗೆ ಹಚ್ಚಲು ಸದವಕಾಶ ಒದಗಿ ಬಂತು. ಗುಡೇರಿಯನ್ ಆಗ ಸ್ಪೇನಿನಲ್ಲೇ ಇದ್ದ ಎಂಬುದನ್ನು ನೆನಪಿನಲ್ಲಿಡಬೇಕು. ರಷ್ಯನ್ನರು ಟ್ಯಾಂಕ್ ಕದನ ತಂತ್ರಗಳತ್ತ ವಿಶೇಷ ಲಕ್ಷ್ಯ ಹರಿಸದಿದ್ದರೂ ಕೆಲವು ಉತ್ತಮ ಟ್ಯಾಂಕುಗಳನ್ನಂತೂ ತಯಾರಿಸಿದ್ದರು. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಸ್ಥಿತಿಯೂ ಹೀಗೆಯೇ. ಹೀಗಾಗಿ ಎರಡನೆಯ ಮಹಾಯುದ್ಧ ಆರಂಭವಾದಾಗ ಬೇರೆ ಎಲ್ಲ ರಾಷ್ಟ್ರಗಳ ಸೈನ್ಯಬಲಗಳಿಗಿಂತಲೂ ಜರ್ಮನರ ಟ್ಯಾಂಕ್ ಪಡೆ ಅತ್ಯಂತ ಬಲಿಷ್ಠವಾಗಿತ್ತು; ಮತ್ತು ಇವರು ಮಾತ್ರ ಆಕ್ರಮಣಶೀಲ ಕಾಳಗದ ಮುಂಚೂಣಿಯಲ್ಲಿ ಟ್ಯಾಂಕುಗಳನ್ನು ಭಾರಿ ಸಂಖ್ಯೆಯಲ್ಲಿ ಹೂಡಲು ಸನ್ನದ್ಧರಾಗಿದ್ದರು. ಶತ್ರು ರಕ್ಷಣಾವ್ಯೂಹಗಳನ್ನು ಒಡೆದು ಮುನ್ನುಗ್ಗಿದೊಡನೆ ಗೆದ್ದ ನೆಲವನ್ನು ಭದ್ರಪಡಿಸಿಕೊಳ್ಳಲು ಸ್ವಂತ ಕಾಲ್ದಳವನ್ನು ಜಾಡಿಪಟ್ಟಿ ಸಹಿತ ಚಕ್ರಗಳಿದ್ದ ವಾಹನಗಳ ಮೇಲೆ ರವಾನಿಸುವುದರಲ್ಲಿ ಮೊದಲಿಗರು ಸಹ ಜರ್ಮನರೇ.

ಪೋಲಿಷ್ ರಣರಂಗವನ್ನು ಜರ್ಮನರು ಟ್ಯಾಂಕ್ ಪಡೆಗಳಿಂದ ಪ್ರವರ್ತಿಸಿದರು. ಪರಿವೇಷ್ಟನೆ ಚಲನ ವಿಧಾನಗಳನ್ನು (ಆ್ಯನ್ವಲಪಿಂಗ್ ಮೂವ್‍ಮೆಂಟ್ಸ್ ಅಂದರೆ ಶತ್ರು ದಳವನ್ನು ಎಲ್ಲ ಕಡೆಗಳಿಂದಲೂ ಸುತ್ತುವರಿದು ಅಮುಕಿನಾಶಮಾಡುವ ಸಮರ ತಂತ್ರ) ಹೂಡಿ ಕೇವಲ ಹದಿನೆಂಟು ದಿವಸಗಳಲ್ಲಿಯೇ ಪೋಲೆಂಡನ್ನು ಜಯಿಸಿ ಸಾಂಪ್ರದಾಯಿಕ ಯುದ್ಧ ನಾಯಕರಿಗೆ ದಿಗ್ಭ್ರಮೆ ಬರಿಸಿದರು. ಆದರೆ ಇಲ್ಲಿ ಜರ್ಮನ್ ಲೋಹಕವಚಯುಕ್ತ ವಾಹನಗಳಿಗೆ (ಆರ್ಮರ್. ಅಂದರೆ ಟ್ಯಾಂಕುಗಳು) ಯಾವುದೇ ಗಮನಾರ್ಹ ಟ್ಯಾಂಕ್ ಎದುರಾಳಿ ಇಲ್ಲದಿದ್ದುದರಿಂದ ಟ್ಯಾಂಕ್-ಟ್ಯಾಂಕ್ ಎದುರಿಸಿ ನಿಂತು ಹೋರಾಡಿದ ಸಮರಕ್ಕೆ ಇದೊಂದು ಉದಾಹರಣೆ ಎನ್ನುವಂತಿಲ್ಲ. ಇದು ಹೇಗೂ ಇರಲಿ. ಪೋಲಂಡಿನವರಿಗೆ ಚಲನಶೀಲ ಯುದ್ಧದ ಮೊದಲ ಕಾವಂತೂ ತಟ್ಟಿದ್ದು ನಿಜ. ಇಂಥ ಒಂದು ಯುದ್ಧದ (ಟ್ಯಾಂಕ್ ಸಹಿತವಾದ ಚಲನಶೀಲ ಕಾಳಗ) ಪೂರ್ಣ ನಿಬಂಧಿತಗಳು (ಇನ್ಫರೆನ್ಸಸ್) ಏನೆಂಬುದೇ ಸಾಂಪ್ರಾದಾಯಿಕ ಸೇನಾನಾಯಕರಿಗೆ ಅರ್ಥವಾಗಲಿಲ್ಲ. ಇಲ್ಲವಾದರೆ ಮ್ಯಾಗಿನೋ ಲೈನಿನಂಥ ಕಾಳಗ ತಡೆಗಳ ರಚನೆಯ ಮೇಲೆ ಅಪಾರ ಹಣವನ್ನು ವೇಳೆಯನ್ನೂ ಅವರು ಸುತರಾಂ ವೆಚ್ಚಿಸುತ್ತಿರಲಿಲ್ಲ.

ಎರಡನೆಯ ಮಹಾಯುದ್ಧ ಆರಂಭವಾದಾಗ ಎರಡು ಸೈನ್ಯಗಳು ಮ್ಯಾಗಿನೋಲೈನ್ ಮತ್ತು ಸೀಜ್‍ಫ್ರೀಡ್ ಲೈನ್ ವರೆಗೆ ಮುನ್ನಡೆದು ಎದುರುಬದುರಾಗಿ ಕಾಪು ಕುಳಿತವು. ಒಂದನೆಯ ಮಹಾಯುದ್ಧದ ದಿನಗಳ ಕಂದಕ ಕಾಳಗದ ಪಳೆಯುಳಿಕೆ ಇದು. ಆದರೆ ಜರ್ಮನರ ಧಾಟಿಯೇ ಬೇರೆ. ಭಾರಿ ಟ್ಯಾಂಕ್ ದಳವನ್ನೇ ಅವರು ಸಂಘಟಿಸಿ ಅದನ್ನು ಫ್ರಾನ್ಸಿನ ಉತ್ತರ ಭಾಗದಲ್ಲಿ ಆರ್ಡೀನ್ಸ್‍ನ ಎದುರು ವಲಯಕ್ಕೆ ರವಾನಿಸಿಯೇ ಬಿಟ್ಟರು. ಈ ಪ್ರದೇಶ ಟ್ಯಾಂಕ್ ಚಲನೆಗೆ ಯೋಗ್ಯವಲ್ಲ ಎಂದು ಪ್ರತಿಯೊಬ್ಬರೂ ನಂಬಿದ್ದರು. ಆದರೆ ಜರ್ಮನ್ ಸೈನ್ಯದಲ್ಲಿದ್ದ ಜನರಲ್ಲುಗಳಾದ ಗುಡೇರಿಯನ್, ರೋಮಲ್ ಮುಂತಾದವರು ನೆಲ ಕಾದಾಟದಲ್ಲಿ ಟ್ಯಾಂಕುಗಳ ನಿರ್ಣಾಯಕ ಪಾತ್ರದ ಮಹತ್ವವನ್ನು ಚೆನ್ನಾಗಿ ಅರಿತಿದ್ದರು. ಜರ್ಮನರ ಟ್ಯಾಂಕುಗಳು ಆರ್ಡೀನ್ಸಿನ ಮೂಲಕ ದಿಗ್ಭೇದಿಸಿ ಬಲಕ್ಕೂ ಎಡಕ್ಕೂ ತಿರುಗಿ ಫ್ರೆಂಚ್ ಹಾಗೂ ಬ್ರಿಟಿಷ್ ಸೈನ್ಯಗಳನ್ನು ಎತ್ತಣಿಂದಲೂ ಸುತ್ತುವರಿದೇ ಬಿಟ್ಟುವು. ಈ ಮಿತ್ತರು ಮಾತ್ರ ತಪ್ಪು ದಿಶೆಯಲ್ಲಿ ಶತ್ರುವನ್ನು ನಿರೀಕ್ಷಿಸುತ್ತ ಬೇಹು ಕೂತದ್ದೂ ಕೂತದ್ದೇ. ಟ್ಯಾಂಕುಗಳ ವೇಗ ಮತ್ತು ಧಕ್ಕಾ ಪರಿಣಾಮ ಅತ್ಯುಗ್ರವೂ ನಿರ್ಣಾಯಕವೂ ಆಗಿದ್ದವು.

ಪುನಃ ಜರ್ಮನರು ಪಶ್ಚಿಮ ಮರುಭೂಮಿಯಲ್ಲಿ ಸಹ ಟ್ಯಾಂಕುಗಳ ಚಲನಶೀಲ ಯುದ್ಧ ವಿಧಾನವನ್ನು ಪ್ರಯೋಗಿಸಿದರು : ಆಕ್ರಮಣದ ಮುಂಚೂಣಿಯಲ್ಲಿ ಭಾರಿ ಸಂಖ್ಯೆಯ ಟ್ಯಾಂಕುಗಳನ್ನು ಹೂಡಿ ಶತ್ರು ವಲಯದಲ್ಲಿ ಬಲು ಆಳದ ವರೆಗೂ ಮುನ್ನುಗ್ಗಿದರು. ಅವರ ಸೈನಿಕ ಸಂಖ್ಯೆ ಮಾತ್ರ ಸಾಕಷ್ಟು ಇಲ್ಲವಾಗಿದ್ದರಿಂದ ಜರ್ಮನರಿಗೆ ಈಜಿಪ್ಟನ್ನು ಸದೆಬಡಿಯಲಾಗಲಿಲ್ಲ. ಮಿತ್ರ ರಾಷ್ಟ್ರಗಳು ಜರ್ಮನರನ್ನು ಆಫ್ರಿಕದಿಂದ ಹಿಮ್ಮೆಟ್ಟುವಂತೆ ಮಾಡಲೇನೋ ಸಮರ್ಥರಾದರು ; ಆದರೆ ಇಲ್ಲಿ ಜರ್ಮನರ ಪ್ರಬಲ ಆಯುಧವಾಗಿದ್ದ ಟ್ಯಾಂಕಿಗೆ ಸರಿಸಾಟಿಯಾಗಿ ಮಿತ್ರರಾಷ್ಟ್ರಗಳ ಟ್ಯಾಂಕು ಏನೂ ಇರಲಿಲ್ಲ. ಲೋಹ ಕವಚದ ಪ್ರಧಾನ ಪಾತ್ರವಾದ ಆಳಕ್ಕೆ ಮುನ್ನುಗ್ಗುವಿಕೆ ಹಾಗೂ ಸುತ್ತುವರಿಯುವಿಕೆಯ ತಂತ್ರವನ್ನು ಯಶಸ್ವಿಯಾಗಿ ಪ್ರಯೋಗಿಸಿದಾತ ಅಮೆರಿಕದ ಜನರಲ್ ಪ್ಯಾಟನ್. ಟ್ಯಾಂಕಿನ ನೆರವಿನಿಂದ ಈತ ಮೂರನೆಯ ಸೈನ್ಯದ (ಥರ್ಡ್ ಆರ್ಮಿ) ಸಮೇತ ಶತ್ರುಸೀಮೋಲ್ಲಂಘನ ಮಾಡಿ ಫ್ರಾನ್ಸಿನ ಫಾಲ್ಸಿ ಎಂಬಲ್ಲಿಂದ ರ್ಹೈನ್ ವರೆಗೆ ಒಂದೇ ಹೊಡೆತದಲ್ಲಿ ಸಾಗಿದ. ಮುಂಬರುತ್ತಿದ್ದ ಮಿತ್ರರ ವಿರುದ್ಧ ಜರ್ಮನರು 1944ರಲ್ಲಿ ಪುನಃ ಒಂದು ಟ್ಯಾಂಕ್ ಆಕ್ರಮಣೆಯನ್ನು ಈ ಸಲ ಪ್ರತ್ಯಾಕ್ರಮಣೆಯಾಗಿ ಪ್ರಯೋಗಿಸಿದರು. ಇದರಲ್ಲಿ ಅವರಿಗೆ ತಾತ್ಕಾಲಿಕ ಯಶಸ್ಸೂ ಲಭಿಸಿತು. ಅವರು ಟ್ಯಾಂಕುಗಳನ್ನು ದಿಟ್ಟತನದಿಂದ ಅಚ್ಚುಕಟ್ಟಾಗಿ ಬಳಸಿದರು. ಆದರೆ ಎದುರಾಳಿಗಳು ಕೇವಲ ಸಂಖ್ಯಾಬಾಹುಳ್ಯ ಜರ್ಮನರನ್ನು ಹಿಮ್ಮೆಟ್ಟಿಸಿ ಸೋಲಿಸಿತು. 

ಜರ್ಮನರೂ ರಷ್ಯನರೂ ಪೂರ್ವ ಯೂರೋಪ್ ರಂಗದಲ್ಲಿ ಗರಿಷ್ಠ ಸಂಖ್ಯೆಯ ಟ್ಯಾಂಕುಗಳನ್ನು ಯುದ್ಧಕ್ಕೆ ಹೂಡಿದರು. ಆ ವಲಯದ ವಿವೃತ ಸ್ವರೂಪ (ಓಪನ್ ನೇಚರ್) ಟ್ಯಾಂಕ್ ಕದನಕ್ಕೆ ಆದರ್ಶವಾಗಿದೆ. ಆದರೆ ಚಳಿಗಾಲದಲ್ಲಿ ಹಿಮವೂ ಟ್ಯಾಂಕ್ ಚಲನೆಯನ್ನು ಪ್ರತಿಬಂಧಿಸುತ್ತಿತ್ತು. ರಷ್ಯನರ ಮತ್ತು ಜರ್ಮನರ ನಡುವಿನ ಕದನದ ಫಲಿತಾಂಶ ನಿರ್ಣಯವಾದದ್ದು ಫಿರಂಗಿದಳದ ಸಾಮೂಹಿಕ ಬೆಂಬಲ ಪಡೆದ ಟ್ಯಾಂಕ್ ಯುದ್ಧದಿಂದಲೇ.

ಇಟಲಿಯ ಭೂಪ್ರದೇಶ ಬೆಟ್ಟಗುಡ್ಡ ಸಹಿತವಾಗಿದೆ ; ದೂರ ಪ್ರಾಚ್ಯದ ಭೂಪ್ರದೇಶ ಅರಣ್ಯಮಯವಾಗಿದೆ-ಹೀಗಾಗಿ ಈ ವಲಯಗಳಲ್ಲಿ ಟ್ಯಾಂಕುಗಳನ್ನು ಅಧಿಕ ಸಂಖ್ಯೆಯಲ್ಲಿ ಹೂಡುವುದು ಸಾಧ್ಯವಾಗಲಿಲ್ಲ. ಹೋರಾಟದ ಹೆಚ್ಚಿನ ಹೊಡೆತವನ್ನು ನೇರವಾಗಿ ಎದುರಿಸಿತ್ತಿದ್ದ ಕಾಲ್ದಳಕ್ಕೆ ಬೆಂಬಲವಾಗಿ ಮಾತ್ರ ಟ್ಯಾಂಕು ಕಾರ್ಯವನ್ನು ನಿಭಾಯಿಸುತ್ತಿತ್ತು. ಆದರೂ ಕೇವಲ ಕೆಲವೇ ಟ್ಯಾಂಕುಗಳು ಕಾದಾಟದ ತಕ್ಕಡಿಯನ್ನು ಮಿತ್ರರಾಷ್ಟ್ರಗಳ ಕಡೆಗೆ ವಾಲುವಂತೆ ಮಾಡಿದ ನಿದರ್ಶನಗಳು ಇದ್ದುವು.

	ಟ್ಯಾಂಕ್ ಹೂಡಿಕೆಯ ತತ್ತ್ವಗಳು : ಯುದ್ಧದಲ್ಲಿ ಟ್ಯಾಂಕನ್ನು ಹೂಡುವಾಗ ಗಮನಿಸಬೇಕಾದ ಆರು ಪ್ರಮುಖ ತತ್ವಗಳನ್ನು ಮುಂದೆ ವಿವರಿಸಿದೆ.
1 ದಟ್ಟೈಸಿಕೆ (ಸಾಂದ್ರೀಕರಣ-ಕಾನ್ಸೆಂಟ್ರೇಷನ್) : ಶತ್ರುವಿನಲ್ಲಿ ಧಕ್ಕಾ ಪರಿಣಾಮವನ್ನು (ಷಾಕ್ ಎಫೇಕ್ಟ್) ಉಂಟು ಮಾಡಲು ಬಳಸುವ ಆಯುಧ ಟ್ಯಾಂಕ್. ಗರಿಷ್ಠ ಧಕ್ಕಾ ಪರಿಣಾಮವಾಗಬೇಕಾದರೆ ಈ ಆಯುಧವನ್ನು ಸಾಂದ್ರೀಕರಿಸಿ ಆಳವಾಗಿ ಹೂಡಬೇಕು. ಉಪಯುಕ್ತವಾಗಿ ಬಳಸಬಹುದಾದಷ್ಟು ಟ್ಯಾಂಕುಗಳನ್ನು ಗರಿಷ್ಠ ಸಂಖ್ಯೆಯಲ್ಲಿ ಚಾಲೂ ಮಾಡಬೇಕು. ಆಗ ಸಾವು ನೋವುಗಳು ಕಡಿಮೆಯಾಗಿ ಗೆಲುವು ದೊರೆವ ಸಂಭಾವ್ಯತೆ ಹೆಚ್ಚಾಗುತ್ತದೆ. ಆದ್ದರಿಂದಲೇ ಕೊನೆಯ ಟ್ಯಾಂಕು ಉಳಿಸಿಕೊಂಡವನೇ ವಿಜಯಿ ಎಂಬ ಉಕ್ತಿ ಬಂದಿದೆ. ಟ್ಯಾಂಕುಗಳ ವಿಶೇಷ ಉಪಯುಕ್ತತೆಯಿಂದಾಗಿ ಯುದ್ಧ ನಾಯಕರಿಗೆ ಇವನ್ನು ಅಲ್ಲಿ ಇಲ್ಲಿ ಎಂದು ವಿಕೇಂದ್ರೀಕರಿಸಿ ಹರಡಿ ಹಂಚಿ ಹಾಕಬೇಕೆಂಬ ಅಪೇಕ್ಷೆ ಬರುವುದುಂಟು. ಆದರೆ ಇಂಥ ಆಶಯವನ್ನು ಹತ್ತಿಕ್ಕಲೇಬೇಕು. ಹಾಗಿದ್ದರೂ ಕೆಲವು ಸಂದರ್ಭದಲ್ಲಿ ಕಾಲ್ದಳದ ಮುಂಗಾಪಿನಲ್ಲಿ ಕೆಲವಾದರೂ ಟ್ಯಾಂಕುಗಳು ಇದ್ದರೆ ಮುನ್ನಡೆಗೆ ಅಧಿಕ ಸಂವೇಗ ದೊರೆಯುತ್ತದೆ. 

2 ಆಕ್ರಮಣಶೀಲ ಕ್ರಿಯೆ (ಅಫೆನ್ಸಿವ್‍ಆ್ಯಕ್ಷನ್): ಎದುರಿರುವ ಯುದ್ಧಕ್ರಿಯೆ ಯಾವುದೇ ಇರಲಿ ಟ್ಯಾಂಕ್ ಒಂದು ಆಕ್ರಮಣಶೀಲ ಆಯುಧ ಎನ್ನುವುದನ್ನು ಚೆನ್ನಾಗಿ ಅರಿತಿರಬೇಕು; ಮತ್ತು ಅದನ್ನು ಆ ಪ್ರಕಾರವೇ ಪ್ರಯೋಗಿಸಬೇಕು ಅಗ್ನಿ ಸಾಮಥ್ರ್ಯದ ಪ್ರಧಾನ ತತ್ವಗಳನ್ನು (ಅಪಾರ ಅಗ್ನಿ ಮತ್ತು ಕ್ಷಿಪ್ರ ಚಲನೆ ಎರಡೂ ಒಂದೇ ವಾಹನದಲ್ಲಿ ಮೇಳೈಸಿವೆ) ಆದರ್ಶ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಟ್ಯಾಂಕು ಅಳವಡಿಸವುದರಿಂದ ನಿಸ್ಸಂದೇಹವಾಗಿ ಇದೊಂದು ಆಕ್ರಮಣಶೀಲ ಆಯುಧ. 

	3 ಚಲನಶೀಲತೆ (ಮೊಬೈಲಿಟಿ) : ಲೋಹ ಕವಚದ (ಆರ್ಮರ್) ಈ ವೈಲಕ್ಷಣ್ಯವನ್ನು ಪೂರ್ಣ ಲಾಭಕ್ಕಾಗಿ ಉಪಯೋಗಿಸಿಕೊಂಡು ಗರಿಷ್ಠ ಸಾಮಥ್ರ್ಯವನ್ನು ಉತ್ಪಾದಿಸಬೇಕು. ಶತ್ರುವನ್ನು ಎದುರಿಸಲು ಸಾಗುವ ದೀರ್ಘ ಮುನ್ನಡೆಯ ವೇಳೆ ಟ್ಯಾಂಕ್ ಬಲಗಳಿಗೆ ಇರುವ ವೇಗ, ದಟ್ಟೈಸಿಕೆ, ಸ್ಥಳ ಪರಿಶೀಲನೆ. ಕಾದಾಟಕ್ಕಾಗಿ ಕ್ಷಿಪ್ರ ವಿತರಣೆ ಈ ಸೌಕರ್ಯಗಳಿಂದಾಗಿ ದಳಪತಿ ಈ ಮುಂದಿನ ನಾಲ್ಕು ಫಲಿತಾಂಶಗಳನ್ನು ಗಳಿಸಬಲ್ಲ: (ಚಿ) ಚಕಿತತೆಯ ಗಳಿಕೆ, (b) ಯುಕ್ತ ವೇಳೆಯಲ್ಲಿ ಗರಿಷ್ಠ ಬಲವನ್ನು ಅವಧಿಕ ಬಿಂದುವಿನಲ್ಲಿ (ಕ್ರಿಟಿಕಲ್ ಪಾಯಿಂಟ್) ದಟ್ಟೈಸುವುದು, (ಛಿ) ಆಕ್ರಮಣದ ಸಂವೇಗವನ್ನು ಕಾಪಾಡಿಕೊಳ್ಳುವುದು, (ಜ) ಯಶಸ್ಸಿನ ಗರಿಷ್ಠ ಉಪಯೋಗ ಪಡೆದುಕೊಳ್ಳುವುದು.

	4 ನಮ್ಯತೆ (ಫ್ಲೆಕ್ಸಿಬಿಲಿಟಿ) : ಎಡ್ಡ ತಿಡ್ಡ ನೆಲದ ಮೇಲೆ ಕವಚ ರಕ್ಷಿತ ವಾಹಗಳ ಕಾರ್ಯನಿರ್ವಹಣೆ ಉನ್ನತ ಮಟ್ಟದ್ದು. ಇವುಗಳಲ್ಲಿ ವಿಪುಲ ನಿಸ್ತಂತು ಸಂಪರ್ಕ ಸಾಕಷ್ಟು ಉಂಟು. ಹೀಗಾಗಿ ನಿಯಂತ್ರಣದಲ್ಲಾಗಲಿ. ಪುನಃ ಸಂಯೋಜನೆಯಲ್ಲಾಗಲಿ, ಆಜ್ಞೆಗಳನ್ನು ನೀಡುವುದರಲ್ಲಾಗಲಿ ಅವನ್ನು ಕ್ಪಿಪ್ರವಾಗಿ ಪಾಲಿಸುವುದರಲ್ಲಾಗಲಿ ಮಾಹಿತಿಯನ್ನು ಅತ್ಯಂತ ವೇಗದಲ್ಲಿ ರವಾನಿಸುವುದರಲ್ಲಾಗಲಿ ನಾಯಕನಿಗೆ ವ್ಯಾಪಕ ನಮ್ಯತೆ ಉಂಟು. ಕದನದಲ್ಲಿ ಲಭಿಸಿದ ಒಂದು ಅನಿರೀಕ್ಷಿತ ಸುಯೋಗವನ್ನು ಗಪ್ಪನೆ ಹಿಡಿಯಲು ಇಲ್ಲವೇ ಹಠಾತ್ತಾಗಿ ಒದಗಿದ ಒಂದು ತೀವ್ರ ಅಡಚಣೆಯನ್ನು ದಾಟಲು ನಾಯಕ ತನ್ನ ಯೋಜನೆಯನ್ನು ಆಗಿಂದಾಗ ಬದಲಾಯಿಸುವುದು ಈ ನಮ್ಯತೆಯಿಂದಾಗಿ ಸಾಧ್ಯವಾಗುತ್ತದೆ.

	5 ಚಕಿತತೆ (ಸಪ್ರ್ರೈಸ್) : ಟ್ಯಾಂಕನ್ನು ಕದನಕ್ಕೆ ಹೂಡಿದ್ದರಿಂದ ಚಕಿತತೆಯನ್ನು ಸಾಧಿಸಿದ್ದೇ ಆದರೆ (ಅಂದರೆ ಎದುರಾಳಿಗೆ ಯಾವ ನಿರೀಕ್ಷೆಯೂ ಇಲ್ಲದಂತೆ ಅಗ್ನಿದಾಳಿಯನ್ನು ತೀವ್ರವಾಗಿ ಮತ್ತು ವ್ಯಾಪಕವಾಗಿ ಮಾಡುವ ಯುದ್ಧ ತಂತ್ರ) ನೆಲ ಕಾದಾಟದಲ್ಲಿ ಬೇರೆ ಯಾವ ಆಯುಧವೂ ಇದರಷ್ಟು ದೀರ್ಘ ಪರಿಣಾಮಕಾರೀ ಫಲಿತಾಂಶಗಳನ್ನು ನೀಡಲಾರದು. ಪೂರ್ಣ ಚಕಿತತೆಯನ್ನು ಸಾಧಿಸಿದಾಗ ಲಭಿಸುವ ಫಲಿತಾಂಶಗಳು ಪ್ರಯುಕ್ತ ಬಲದ ಪ್ರಮಾಣಕ್ಕೆ ತೀರಮೀರಿದವಾಗಿರುವುವು. ಕಾಲ್ದಳದ ಡಿವಿಷನ್ನುಗಳೇ, ಅವುಗಳ ನಡುವೆ ಹಠಾತ್ತಾಗಿ ಶತ್ರು ಟ್ಯಾಂಕುಗಳ ಒಂದು ಸಮುದಾಯ ಕಾಣಿಸಿಕೊಂಡಾಗ, ಶರಣು ಹೋದದ್ದು ಉಂಟು. ಅಂದಮಾತ್ರಕ್ಕೆ ಲೋಹ ಕವಚದ ಅಸ್ತಿತ್ವವನ್ನು ಅಡಗಿಸಿಡುವುದು ಸದಾ ಸುಲಭ ಎಂದೇನೂ ಹೇಳಲಾಗದು. ಪ್ರಾರಂಭಿಕ ಚಕಿತತೆಯನ್ನು ಸಾಧಿಸುವುದು ಬಲು ಕಷ್ಟ. ಹಾಗಿದ್ದರೂ ಕದನ ನಡೆಯುತ್ತಿರುವಾಗ ರಂಗದ ಅನಿರೀಕ್ಷಿತ ಮೂಲೆಗಳಿಂದ ಅಗ್ನಿವರ್ಷವನ್ನು ಕರೆಯುವುದರ ಮೂಲಕ ಸಮರತಾಂತ್ರಿಕ ಚಕಿತತೆಯನ್ನು (ಟಾಕ್ಟಿಕಲ್ ಸಪ್ರ್ರೈಸ್) ಸಾಧಿಸಬಹುದು.

	6 ಸಹಕಾರ : ಸ್ವತಃ ಟ್ಯಾಂಕು ಒಂದೇ ಹೆಚ್ಚಿನ ಏನನ್ನೂ ಸಾಧಿಸಲಾರದು. ಜಯಗಳಿಸಬೇಕಾದರೆ ಸರ್ವಬಲಗಳ ನಿಕಟ ಸಹಕಾರ ಅತ್ಯಗತ್ಯ, ಪರಸ್ಪರರ ಸಾಮಾಥ್ರ್ಯಗಳನ್ನೂ ಮಿತಿಗಳನ್ನೂ ಅರಿತು ಸಾಕಷ್ಟು ಜಂಟಿ ಶಿಕ್ಷಣಗಳನ್ನು ಮೊದಲೇ ನಡೆಸಿ ವೈಯಕ್ತಿಕ ಸ್ನೇಹಸೌಹಾರ್ದಗಳನ್ನು ಬೆಳಸಿಕೊಂಡು ಸಹಕಾರವನ್ನು ಪಡೆಯಬೇಕಾಗುತ್ತದೆ.
ಟ್ಯಾಂಕಿನ ಪಾತ್ರಗಳು : ಆಕ್ರಮಣ : ಆಕ್ರಮಣದ ವೇಳೇಯಲ್ಲಿ ಟ್ಯಾಂಕಿನ ಪಾತ್ರ ಶತ್ರುವಿನ ಮುಂಗರೆಯನ್ನು ಹಿಡಿದು ನಿಲ್ಲಿಸುವುದು ಹಾಗೂ ಪಕ್ಕಗಳಿಂದ ವ್ಯಾಪಕವಾಗಿ ಸಾಗುತ್ತ ಶತ್ರುವಿನ ಹಿಂಬದಿಯಿಂದ ಆತನ ರಕ್ಷಣೆಗಳನ್ನು ಸುತ್ತುವರಿದು ಬಳಿಕ ಅವನ್ನು ಬಿಡಿಬಿಡಿಯಾಗಿ ನಾಶಪಡಿಸುವುದು, ಟ್ಯಾಂಕು ಹೀಗೆ ಸಾಗುತ್ತಿರುವಾಗ ಶತ್ರುವನ್ನು ಕದನದಲ್ಲಿ ಉಜ್ಜುಗಿಸಿ ಹಿಡಿದಿಡುವ ಕೆಲಸವನ್ನು ಬಹುಶಃ ಇತರ ದಳಗಳು ಮಾಡಬೇಕಾಗುತ್ತದೆ. ಶತ್ರುವಿನ ರಕ್ಷಣೆಗಳನ್ನು ಟ್ಯಾಂಕುಗಳು ಅಗ್ನಿವರ್ಷ, ಕ್ಷಿಪ್ರಚಲನೆ ಹಾಗೂ ಧಕ್ಕಾಕ್ರಿಯೆಗಳ ಮೂಲಕ ನೇರಿದಿನಿಂದ ಹೊಡೆದು ಭೇದಿಸಬಲ್ಲವು. ಒಮ್ಮೆ ಈ ವಿಭೇದನ ಸಿದ್ಧಿಸಿತೋ ಮತ್ತೆ ಟ್ಯಾಂಕುಗಳು ಮುಂದೆ ಮುಂದೆ ಧಾವಿಸುತ್ತ ತಮ್ಮ ಗೆಲುವಿನ ಪೂರ್ಣಲಾಭವನ್ನು ಪಡೆಯುತ್ತವೆ. ಕಾಲ್ದಳ ನಡೆಸುವ ಆಕ್ರಮಣದಲ್ಲಿ ಟ್ಯಾಂಕುಗಳು ನಿಕಟ ಹಾಗೂ ನಿಬಿಡವಾದ ಗುಂಡಿನ ಮಳೆಯಿಂದಲೂ ಕ್ಷಿಪ್ರಸ್ಥಾನಪಲ್ಲಟಗಳಿಂದಲೂ ಬೇಕಾದಲ್ಲಿ ಸಾಕಷ್ಟು ಒತ್ತಾಸೆಯನ್ನು ನೀಡಬಲ್ಲವು ಕಾಲ್ದಳಗಳ ನೆಲೆಗಳನ್ನೂ ನೆಲಸಮ ಮಾಡುತ್ತ ಟ್ಯಾಂಕುಗಳು ಸಾಗಬಲ್ಲವು.
ರಕ್ಷಣೆ : ರಕ್ಷಣೆಯಲ್ಲಿ ಟ್ಯಾಂಕುಗಳು ಸಾಧರಣವಾಗಿ ಕಾಲ್ದಳದ ನೆಲೆಗಳ ಒಳಗಡೆ ಇರುತ್ತವೆ ಅಲ್ಲಿಂದಲೇ ಗುಂಡು ಹೊಡೆದು ಅವು ಶತ್ರು ಟ್ಯಾಂಕುಗಳನ್ನು ಇಲ್ಲವೇ ಆಕ್ರಮಣವನ್ನು ಎದುರಿಸಬಲ್ಲವು. ಸ್ವಂತ ಸ್ಥಾನ ಕಳೆದು ಹೋದಾಗ ಅಲ್ಲಿದ್ದ ಟ್ಯಾಂಕುಗಳು ಶತ್ರು ಸ್ಥಾಪನೆಗೊಳ್ಳುವುದನ್ನು ಶಕ್ಯವಿರುವವರೆಗೂ ಎದುರಿಸಿ ತೊಂದರೆ ಕೊಡಬಹುದು ; ಒಮ್ಮೊಮ್ಮೆ ಆತನನ್ನು ಹಿಮ್ಮೆಟ್ಟಿಸಲೂ ಬಹುದು.

	ಹಿಮ್ಮೆಟ್ಟುವಿಕೆ (ವಿತ್‍ಡ್ರಾಅಲ್): ಸ್ವಂತ ದಳ ಹಿಮ್ಮೆಟ್ಟುವ ವೇಳೆ ಟ್ಯಾಂಕುಗಳನ್ನು ಅನುಕೂಲ ಸ್ಥಾನಗಳಲ್ಲಿ (ಒಂದಾದ ಬಳಿಕ ಒಂದರಂತೆ) ನೆಲೆಗೊಳಿಸಬಹುದು. ಮುನ್ನುಗ್ಗುತ್ತಿರುವ ಶತ್ರುವನ್ನು ಇವು ತಮ್ಮ ದೀರ್ಘವ್ಯಾಪ್ತಿಯ ಫಿರಂಗಿಗಳ ನೆರವಿನಿಂದ ಅಲ್ಲಲ್ಲೇ ತಡೆದು ನಿಲ್ಲಿಸಿ ಸ್ವಂತ ದಳಗಳು ಸುರಕ್ಷಿತವಾಗಿ ಹಿಮ್ಮೆಟ್ಟುವುದನ್ನು ಸಾಧಿಸಬಹುದು. ಈ ಪ್ರಕಾರ ಶತ್ರುವನ್ನು ತಡೆಹಿಡಿದ ಟ್ಯಾಂಕುಗಳು ಯುಕ್ತ ವೇಳೆಯಲ್ಲಿ ಕ್ಷಿಪ್ರಗತಿಯಿಂದ ಸ್ವಸ್ಥಾನಕ್ಕೆ ಮರಳಬಲ್ಲವು.

	ಇತರ ಪಾತ್ರಗಳು : ಮುನ್ನಡೆಯ (ಅಡ್ವಾನ್ಸ್) ವೇಳೆ ಟ್ಯಾಂಕುಗಳನ್ನು ಬಲು ಮುಂಚಿತವಾಗಿಯೇ ರವಾನಿಸಲಾಗುವುದು. ಇವು ಆ ವಲಯವನ್ನು ಪರಿವೀಕ್ಷಿಸಿ, ಹಿಂದೆ ಬರುತ್ತಿರುವ ಪ್ರಧಾನ ದಳಕ್ಕೆ ಮಾಹಿತಿಗಳನ್ನು ವರದಿ ಮಾಡಬೇಕು. ಆಗ ಪರಿಸ್ಥಿತಿಗೆ ಅನುಸಾರವಾಗಿ ದಳ ತನ್ನ ಮುನ್ನಡೆಯನ್ನು ಮಾರ್ಪಡಿಸಿಕೊಳ್ಳುವುದು. ಮುನ್ನಡೆಯುತ್ತಿರುವ ಸೇನಾವ್ಯೂಹದ ಬದಿಗಳನ್ನು ಟ್ಯಾಂಕು ರಕ್ಷಿಸಬಲ್ಲವು. ಅನಿರೀಕ್ಷಿತ ಸ್ಥಳ ಹಾಗೂ ವೇಳೆಗಳಲ್ಲಿ ಟ್ಯಾಂಕುಗಳು ಕಾಣಿಸಿಕೊಂಡು ಶತ್ರುವಿನ ಲಕ್ಷ್ಯವನ್ನು ಬೇರೆ ಬೇರೆ ಕಡೆಗಳಿಗೆ ಸೆಳೆದು ಆತನ ದಳಗಳನ್ನು ಸತಾಯಿಸಬಹುದು, ಅಥವಾ ಆತನ ದಳಗಳು ಅನಾವಶ್ಯಕವಾಗಿ ಹರಡಿ ಹೋಗುವಂತೆ ಮಾಡಬಹುದು; ಆತನ ಟ್ಯಾಂಕುಗಳು ತಪ್ಪು ನೆಲೆಗಳಿಗೆ ಸಾಗುವಂತೆಯೂ ಮಾಡಬಹುದು.

	ಟ್ಯಾಂಕ್ ದಳಗಳ ವ್ಯವಸ್ಥಾಪನೆ ಮತ್ತು ಸಂಯೋಜನೆಗಳು (ಫಾರ್ಮೇಷನ್ಸ್) : ಟ್ಯಾಂಕಿನ ಮೂಲಭೂತ ಘಟಕಕ್ಕೆ ದಳ (ಯೂನಿಟ್) ಎಂದೂ ದಳಗಳ ಸಮೂಹಗಳಾದ ಬ್ರಿಗೇಡು ಮತ್ತು ಡಿವಿಷನ್ನುಗಳಿಗೆ ಸಂಯೋಜನೆಗಳು ಎಂದೂ ಹೆಸರು. ಒಂದು ಟ್ಯಾಂಕು ಘಟಕ ಇಲ್ಲವೇ ರೆಜಿಮೆಂಟಿನಲ್ಲಿ ಸಾಧಾರಣವಾಗಿ 3 ಸ್ಕ್ವಾಡ್ರನುಗಳಿರುವುವು; ಟ್ಯಾಂಕುಗಳ ಒಟ್ಟು ಸಂಖ್ಯೆ ಸುಮಾರು 50.ಟ್ಯಾಂಕ್ ಬ್ರಿಗೇಡಿನಲ್ಲಿ 3ರಿಂದ 4 ರೆಜಿಮೆಂಟುಗಳಿರುವುವು. ಟ್ಯಾಂಕುಗಳ ಒಟ್ಟು ಸಂಖ್ಯೆ ಸುಮಾರು 200.ಟ್ಯಾಂಕ್ ಡಿವಿಷನ್ನಿನಲ್ಲಿ ಒಂದು ಟ್ಯಾಂಕ್ ಬ್ರಿಗೇಡ್ ಮತ್ತು ಒಂದು ಲಾರಿ ಇಲ್ಲವೇ ಮೋಟಾರ್ ಬ್ರಿಗೇಡ್ ಇರುವುವು : ಟ್ಯಾಂಕುಗಳ ಒಟ್ಟು ಸಂಖ್ಯೆ 200ರಿಂದ 300. ಟ್ಯಾಂಕ್ ಸೈನ್ಯದಲ್ಲಿ 2ರ ಮೇಲೆ ಎಷ್ಟೂ ಟ್ಯಾಂಕ್ ಡಿವಿಷನ್ನುಗಳಿರಬಹುದು. ಗರಿಷ್ಠ ಸಂಖ್ಯೆಯು ಟ್ಯಾಂಕುಗಳ ಒದಗುವಿಕೆಯನ್ನು ಅವಲಂಬಿಸಿದೆ. ಈ ಮೇಲಿನ ಯಾವುದೇ ಲೆಕ್ಕಗಳು ಕರಾರುವಾಕ್ಕೇನಲ್ಲ. ರಾಷ್ಟ್ರದಿಂದ ರಾಷ್ಟ್ರಕ್ಕೆ ಇವು ಬದಲಾಗುತ್ತವೆ. ಪಾಶ್ಚಾತ್ಯ ರಾಷ್ಟ್ರಗಳ ಪೈಕಿ ಹೆಚ್ಚಿನವು ಈಗ ಸ್ವತಂತ್ರ ಟ್ಯಾಂಕ್ ಬ್ರಿಗೇಡುಗಳ ಸ್ಥಾಪನೆಯತ್ತ ವಿಶೇಷ ಲಕ್ಷ್ಯ ಹರಿಸುತ್ತಿವೆ. ನ್ಯೂಕ್ಲಿಯಾತ್ಮಕ ಯುದ್ಧವಾದಲ್ಲಿ ಅಂಥ ಏರ್ಪಾಡಿನಿಂದ ಅಧಿಕ ರಕ್ಷಣೆ ಉಂಟು.					(ಎ.ಸಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ